ದೇಶಬಂಧು
1.  ಬೆಂಗಳೂರಿನಿಂದ ಕನ್ನಡದಲ್ಲಿ ಪ್ರಕಟವಾಗುತ್ತಿದ್ದ ದಿನ ಹಾಗೂ ವಾರ ಪತ್ರಿಕೆಗಳು.  ದಿನಪತ್ರಿಕೆ ಕರೀಟ ಆಕಾರದ 4 ಪುಟಗಳನ್ನೂ ವಾರಪತ್ರಿಕೆ ಕಿರೀಟ 1/2  ಆಕಾರದ 16 ಪುಟಗಳನ್ನು ಒಳಗೊಂಡಿತ್ತು.  ಸಿ. ಹಯವದನರಾಯರ ಪ್ರಧಾನ ಸಂಪಾದಕತ್ವದಲ್ಲಿ ಬೆಂಗಳೂರಿನಿಂದ ಮೇ 1939 ರಲ್ಲಿ ಪ್ರಕಟಣೆ ಪ್ರಾರಂಭವಾಯಿತು.  ದಿನಪತ್ರಿಕೆಯ ಬಿಡಿ ಪ್ರತಿಯ ಬೆಲೆ ಒಂದು ಆಣೆ. ವಾರ ಪತ್ರಿಕೆಯ ಸಂಚಿಕೆಯ ಬೆಲೆ 1 1/2 ಆಣೆ.  ಪತ್ರಿಕೆಯ ಒಡೆತನ ಮೈಸೂರು ನ್ಯೂಸ್‍ಪೇಪರ್ ಕಂಪೆನಿಯದಾಗಿತ್ತು.   ಆಗಿನ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆಗಾಗಿ ಜರುಗುತ್ತಿದ್ದ ಚಳುವಳಿಯ ಬಗ್ಗೆ ಮೈಸೂರು ಸರ್ಕಾರದ ನಿಲುವು ಧೋರಣೆಗಳಿಗೆ ಪ್ರಚಾರ ನೀಡುವುದೇ ಪತ್ರಿಕೆಗಳ ಮೂಲೋದ್ದೇಶವಾಗಿತ್ತು.  ರಾಯಿಟರ್ ಮತ್ತು ಅಸೋಸಿಯೇಟೆಡ್ ಪ್ರೆಸ್ ಸಂಸ್ಥೆಗಳ ಸುದ್ದಿಗಳೂ ಜಿಲ್ಲಾ ಮತ್ತು ಸ್ಥಳೀಯ ವಾರ್ತೆಗಳೂ ದಿನಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು.  ಮಿರ್ಜಾ ಎಂ. ಇಸ್ಮೇಲರು ಸಂಸ್ಥಾನದ ದಿವಾನ್ ಹುದ್ದೆಗೆ ರಾಜೀನಾಮೆ ನೀಡಿದ ಮೇಲೆ ಪತ್ರಿಕೆಗೆ ಸರ್ಕಾರದ ಪ್ರೋತ್ಸಾಹ ಕಡಿಮೆಯಾಯಿತು.  ಮಾಲೀಕ ವರ್ಗಕ್ಕೂ ಸಂಪಾದಕ ವರ್ಗಕ್ಕೂ ನಡುವೆ ಭಿನ್ನಾಭಿಪ್ರಾಯಗಳು ಉಂಟಾದವು.  1942 ರಲ್ಲಿ ಎನ್. ಎಸ್. ವೆಂಕೋಬರಾಯರು ಸಂಪಾದಕರಾದರು.  ಮಾಲೀಕರು ಆರ್ಥಿಕ ಮುಗ್ಗಟ್ಟಿನಿಂದಾಗಿ ಪತ್ರಿಕೆಯನ್ನು ನಡೆಸುವುದು ಕಷ್ಟವಾಯಿತು.  1943 ರ ಸೆಪ್ಟೆಂಬರ್‍ನಿಂದ ಪತ್ರಿಕೆಯ ಪ್ರಕಟಣೆಯನ್ನು ನಿಲ್ಲಿಸಲಾಗಿದೆಯೆಂದು ನ್ಯೂಸ್‍ಪೇಪರ್ ಕಂಪನಿ ತನ್ನ ಸಿಬ್ಬಂದಿಗೆ ತಿಳಿವಳಿಕೆ ನೀಡಿತು.  ಪತ್ರಿಕೆಯ ಸಂಪಾದಕ ವರ್ಗದವರಲ್ಲೊಬ್ಬರಾಗಿದ್ದ ಬಿ. ಎಸ್. ವೆಂಕಟರಾವ್ ಅವರು 1943 ರ ಅಕ್ಟೋಬರ್ 1 ರಿಂದ ದೇಶಬಂಧುದಿನ ಮತ್ತು ವಾರಪತ್ರಿಕೆಗಳ ಸಂಪೂರ್ಣ ಒಡೆತನವನ್ನು ಪಡೆದುಕೊಂಡು ಅದನ್ನು ರಾಷ್ಟ್ರಸೇವೆಗೆ ಮುಡಿಪಾಗಿಟ್ಟರು.  ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮತ್ತು ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆಗೆ ಮೈಸೂರು ಕಾಂಗ್ರೆಸ್ ಹೂಡಿದ್ದ ಸತ್ಯಾಗ್ರಹ ಚಳುವಳಿಗೆ ಈ ಪತ್ರಿಕೆಗಳು ಪೂರ್ಣ ಬೆಂಬಲ ನೀಡಿದುವು.

1947 ರಲ್ಲಿ ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರಕ್ಕಾಗಿ ಚಳುವಳಿ ಬಿರುಸಾದಾಗ ಈ ಚಳುವಳಿಗೆ ಸಂಬಂಧಪಟ್ಟ ಯಾವುದೇ ಸುದ್ದಿಗಳನ್ನಾಗಲಿ ಭಾಷಣಗಳನ್ನಾಗಲಿ ಟೀಕೆಗಳನ್ನಾಗಲಿ ಸಂಸ್ಥಾನ ಸರ್ಕಾರದ ನ್ಯಾಯಾಂಗ ಶಾಖಾ ಕಾರ್ಯದರ್ಶಿಗಳ ಪರಿಶೀಲನೆಗೆ ಒಳಪಡಿಸದೆ ಪತ್ರಿಕೆಗಳು ಪ್ರಕಟಿಸಲಾಗದೆಂಬ ಆಜ್ಞೆ ಜಾರಿಯಾಯಿತು.  ಇದರ ಬಗ್ಗೆ ಅಸಮಾಧಾನಗೊಂಡು `ದೇಶಬಂಧು ಒಂದನ್ನುಳಿದು ಎಲ್ಲ ಕನ್ನಡ ಪತ್ರಿಕೆಗಳೂ ಪ್ರಕಟಣೆ ನಿಲ್ಲಿಸಿದುವು.  ದೇಶಬಂಧು ಪತ್ರಿಕೆ ಪ್ರಕಟಣೆ ನಿಲ್ಲಿಸದೆ ಸತ್ಯಾಗ್ರಹದ ಸುದ್ದಿ ಟೀಕೆಗಳನ್ನು ಪ್ರಧಾನವಾಗಿ ಪ್ರಕಟಿಸುತ್ತಿತ್ತು.  ಸರಸಣ್ಣನಿಂತೆಂದ ಎಂಬ ಶಿರೋನಾಮೆಯ ಸರಸ ಸರಣಿಯ ರಾಜಕೀಯ ಮಾರ್ಮಿಕ ಟೀಕೆಗಳು ಜನಪ್ರಿಯವಾದವು.  ಪತ್ರಿಕೆ ಕಾಗದದ ಕೋಟಾ ಕಳೆದುಕೊಳ್ಳಬೇಕಾಯಿತು.  ಹೆಚ್ಚು ಬೆಲೆಕೊಟ್ಟು ಕಾಗದ ಕೊಂಡು ಪ್ರಕಟಣೆ ಮುಂದುವರಿಸಬೇಕಾಯಿತು.  ಕಾಗದದ ಕ್ಷಾಮ, ಆರ್ಥಿಕ ಕಷ್ಟನಷ್ಟಗಳನ್ನು ಎದುರಿಸಬೇಕಾಗಿ ಬಂದ ಈ ಪತ್ರಿಕೆಗಳು 1950 ರ ಡಿಸೆಂಬರ್ ಅಂತ್ಯದವರೆಗೂ ಮುಂದುವರಿದು ಕೊನೆಗೆ ನಿಂತುಹೋದವು.  ಅನೇಕ ತರುಣರಿಗೆ ಈ ಪತ್ರಿಕೆಗಳು ಪತ್ರಿಕೋದ್ಯಮದ ಅನುಭವ ದೊರಕಿಸಿಕೊಟ್ಟವು.  				          (ಬಿ.ಎಸ್.ವಿ ಇ.)

2.  ಇದೇ ಹೆಸರಿನ ಮಾಸಪತ್ರಿಕೆಯೊಂದು 1928 ರಲ್ಲಿ ಮಂಗಳೂರಿನಲ್ಲಿ ಪ್ರಾರಂಭವಾಗಿತ್ತು.  ಇದು ಇಂಗ್ಲೀಷ್ ಭಾಷೆಯಲ್ಲಿ ಹೊರಟ ಮಂಗಳೂರಿನ ಪ್ರಥಮ ಪತ್ರಿಕೆ.  ಎಸ್. ಶಾಂತಾರಾಮ ಪೈ ಪ್ರಧಾನ ಸಂಪಾದಕರು, ನಿವೃತ್ತ ಖಜಾನೆ ಡೆಪ್ಯುಟಿ ಕಲೆಕ್ಟರ್ ಎಚ್. ಸುಬ್ಬರಾವ್ ಖಜಾಂಚಿ, ಎಸ್. ವೆಂಕಟರಮಣ ಪೈ ಉಪಸಂಪಾದಕರು, ಎಡ್ವರ್ಡ್ ಡೇವಿಡ್ ಮತ್ತು ಎಸ್. ಗೋಪಾಲರಾವ್ ಕಾರ್ಯದರ್ಶಿಗಳು.  ಡಿಮೈ 1/8 ಆಕಾರದ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಮೂರು ಆಣೆಗಳು; ವಾರ್ಷಿಕ ಚಂದಾ ಎರಡು ರೂಪಾಯಿಗಳು.  ಜಾತಿ ಮತ ಭೇದವಿಲ್ಲದೆ ಧಾರ್ಮಿಕ ಮತ್ತು ಸಾಮಾಜಿಕ ಪ್ರಗತಿಗೆ ಮೀಸಲಾಗಿರಿಸಿದ ಪತ್ರಿಕೆಯೆಂದು ಪ್ರಥಮ ಸಂಚಿಕೆಯ ಕೊನೆಯ ಪುಟದಲ್ಲಿ ವಿವರಿಸಲಾಗಿತ್ತು.  ದೇಶಭಕ್ತಿಯನ್ನೂ ರಾಷ್ಟ್ರ ಚೈತನ್ಯವನ್ನೂ ಪ್ರಸಾದಿಸುತ್ತಿದ್ದ ಈ ಪತ್ರಿಕೆ ಎಷ್ಟು ಕಾಲ ಬಾಳಿತ್ತು ಎಂಬುದು ತಿಳಿಯುವುದಿಲ್ಲ. 				  (ಪಿ.ಐ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ